Tuesday, July 21, 2009

ಮನೆಯ ಕಟ್ಟುವೆನು

ಕಟ್ಟುವೆನು ಕಟ್ಟುವೆನು ಮನವೆಂಬ ಮನೆಯ ಕಟ್ಟುವೆನು!
ಸಾಗರಕ್ಕಿಂತ ವಿಶಾಲ, ಆಕಾಶಕ್ಕಿಂತ ಎತ್ತರ
ಹೀಗೊಂದು
ಮನೆಯ ಕಟ್ಟುವೆನು!

ಮನೆಯಲಿ ಕಲ್ಲುಗಂಬಗಳಿಲ್ಲ, ಇಲ್ಲ ಕಲ್ಲು ಚಪ್ಪಡಿ
ರಮಣನೇ ಆಧಾರಸ್ತಂಭ, ಇಲ್ಲಿ ಅರುಣಾಚಲನೇ ಚಾವಡಿ!
ಕಟ್ಟುವೆನು ಕಟ್ಟುವೆನು, ಮನವೆಂಬ ಮನೆಯ ಕಟ್ಟುವೆನು!

ಮನೆಯಲಿ ಸೂರ್ಯಚಂದ್ರರಿಲ್ಲ, ಇಲ್ಲ ಅವರಿಬ್ಬರ ಗ್ರಹಣವು
ರಮಣನ ತೇಜಃಪುಂಜವಿರಲು, ಸದಾ ಪ್ರಜ್ವಲಿಸುವುದು ನನ್ನಗೃಹವು!
ಕಟ್ಟುವೆನು ಕಟ್ಟುವೆನು, ಮನವೆಂಬ ಮನೆಯ ಕಟ್ಟುವೆನು!

ಮನೆಯಲಿ ಬಂಧು ಬಾಂಧವರಿಲ್ಲ, ಇಲ್ಲ ಮಡದಿ ಮಕ್ಕಳು
ರಮಣನೇ ನಾವಿಕನಾಗಿರಲು, ದಾಟಿಸುವನು ಸಂಸಾರ ಸಾಗರವನು!
ಕಟ್ಟುವೆನು ಕಟ್ಟುವೆನು, ಮನವೆಂಬ ಮನೆಯ ಕಟ್ಟುವೆನು!

ಮನೆಯಲಿ ಪಡಸಾಲೆ ಅಡುಗೆಸಾಲೆಗಳಿಲ್ಲ, ಇಲ್ಲ ದೇವರಕೋಣಿಯು
ರಮಣನೇ ಅಡುಗೆಭಟ್ಟನಾಗಿರಲು, ದಿನನಿತ್ಯ
ದೊರಕುವುದು ದಿವ್ಯಪ್ರಸಾದವು!
ಕಟ್ಟುವೆನು ಕಟ್ಟುವೆನು, ಮನವೆಂಬ ಮನೆಯ ಕಟ್ಟುವೆನು!

ಮನೆಯಲಿ ಆಳು-ಕಾಳುಗಳಿಲ್ಲ, ಇಲ್ಲ ರಾಜ-ರಾಣಿಯರು
ರಮಣನೊಬ್ಬನೇ ಚಕ್ರವರ್ತಿಯಾಗಿರಲು, ನಾನೇ ಅವನ ದಾಸನು!
ಕಟ್ಟುವೆನು ಕಟ್ಟುವೆನು, ಮನವೆಂಬ ಮನೆಯ ಕಟ್ಟುವೆನು!

ಮನೆಯಲಿ ದೇವರಮೂರ್ತಿಗಳಿಲ್ಲ, ಇಲ್ಲ ಅಭಿಷೇಕಾಚರ್ನೆಗಳು
ರಮಣನೇ ಸರ್ವಸ್ವನಾಗಿರಲು, ಕಾಣುವೆನೆಲ್ಲಡೆ ಪರಮಾನಂದವನು!
ಕಟ್ಟುವೆನು ಕಟ್ಟುವೆನು, ಮನವೆಂಬ ಮನೆಯ ಕಟ್ಟುವೆನು!

ಮನೆಯಂಗಳದಲಿ ನಿಂತು "ತೆರೆದಿದೆ ಮನೆ ಓ ಬಾ ಅತಿಥಿ..." ಎಂದು
ರಮಣನೇ ಆಹ್ವಾನಿಸುತಿರಲು, ಅವನ
ಜೋಡಿ ಆಡಿ ನಲಿದಾಡುವೆನು!
ಕಟ್ಟುವೆನು ಕಟ್ಟುವೆನು, ಮನಸೆಂಬ ಮನೆಯ ಕಟ್ಟುವೆನು!

No comments:

Post a Comment