
ಆ ಸುದಿನ, ನಿಮ್ಮ ತೀಕ್ಷ್ಣ ಕಣ್ಣಂಚಿನ ಮೌನ ಎನಗೆ 'ಬಾ' ಎಂದಂತಿತ್ತು!
ನಿಮ್ಮ ಕಂಗಳ ವರ್ಚಸ್ಸು ನನ್ನ ಮನಸ್ಸಿನ ಎಲ್ಲೆಗಳ ಆಚೆಗೆ ಬೆಳಕ ಹರಿಸಿದಂತಿತ್ತು!
ನಿಮ್ಮ ನೋಟ ಮಾತ್ರದಿಂದಲೇ ನಾನು ನೀರಾಗಿ, ಕಣ್ಣೀರ ಧಾರೆಯಾಗಿ ಹರಿದೆನು!
ಆ ಕ್ಷಣದಲ್ಲಿ ಹಿಂದೆಂದೂ ಕಾಣದ ಪ್ರೀತಿ ವಾತ್ಸಲ್ಯವನು, ಕರುಣಾಧಾರೆಯನು ನಿಮ್ಮಲ್ಲಿ ಕಂಡೆನು!!
ಏನೆಂದು ಬಣ್ಣಿಸಲಿ ರಮಣಾಚಲ?
ಕಬ್ಬಿಣದ ಕಸವಾಗಿದ್ದ ನನ್ನನ್ನು ಸೂಜಿಗಲ್ಲಿನಂತೆ
ಸೆಳೆದು ಸೆರೆಹಿಡಿದ ಆ ಎರಡು ಕ್ಷಣಗಳ ಏನೆಂದು ನಾ ಬಣ್ಣಿಸಲಿ?
ಮೌನದಲೇ ಮಾತನಾಡಿಸಿ ಮೂಕವಿಸ್ಮಿತಗೊಳಿಸಿದ
ನಿಮ್ಮ ಮಹಿಮೆಯನು ನಾನೇನೆಂದು ಬಣ್ಣಿಸಲಿ ತಂದೆ!
ಸೋತಿಹೆನು ಮಾಡಲಾಗದೆ ಆ ಕ್ಷಣದ ವರ್ಣನೆ!
ಆದರೂ, ಸದಾ ಇರಲಿ ನನಗೆ ಆ ಕ್ಷಣದ ಸ್ಮರಣೆ!
ಆಶೆಗಳು ಇಲ್ಲವೆನಲು ನಾ ಯೋಗ್ಯ ಯೋಗಿಯೇನಲ್ಲ!
ಇರಲಿ ಒಂದೇ ಒಂದು, ಆಶೆಯೊಂದೆನಗೆ
ಇರಲಿ ಜೀವನದ ಕ್ಷಣ ಕ್ಷಣವು, ಪ್ರತಿ ಕ್ಷಣವೂ
ಆ ಎರಡು ಕ್ಷಣಗಳಂತೆ!! ಆ ಎರಡು ಕ್ಷಣಗಳಂತೆ!!!
.....ನಿಮ್ಮ ಪವಿತ್ರ ಚರಣಾರವಿಂದಗಳಲ್ಲಿ .
No comments:
Post a Comment