Friday, July 31, 2009

ಕರುಣಾಪೂರ್ಣನ ಕೃಪಾಸುಧೆ

ರೋಗವೊಂದು ಇಂದು ಎನ್ನನ್ನು ಕಾಡಿತ್ತು!
ಬಲಿ ತೆಗೆಯುವ ಕುತಂತ್ರ ಹೂಡಿತ್ತು!!

ಮೆಲ್ಲನೆ ನುಸುಳಿ ವಿಷವನು ಬೆರೆಸಿ ಮನವನು ಆಕ್ರಮಿಸಿಕೊಂಡಿತ್ತು!
ತಿಳಿದೋ, ತಿಳಿಯದೆಯೋ ನನ್ನ ಮನವು ವಿಷವನೆ ಸಿಹಿ ಎಂದು ನಂಬಿತ್ತು!

ಸಿಹಿಯ ಗುಣವನು ವಿಚಾರಿಸಿ ಅರಿಯುವ ಮುನ್ನ
ರೋಗವು ಎನನ್ನು ವಶಪಡಿಸಿಕೊಂಡಿತ್ತು!
ಬಲಿ ತೆಗೆಯುವ ಕುತಂತ್ರ ಹೂಡಿತ್ತು!

ವಿಷದಲಿ ಮುಳುಗಿ ಬಲಿಯಾಗುವ ಮುನ್ನ
ಅರಿಯದೊಂದು ಶಕ್ತಿ ಎನ್ನಲಿ ಮೂಡಿತ್ತು!
ಹೃದಯದಿಂದ ಅರುಣಾಚಲನನ್ನು ನೆನೆದಿತ್ತು!

ಅರುಣಾಚಲನನ್ನು ಸ್ಮರಿಸದ ತಪ್ಪಿಗೆ ಕ್ಷಮೆಯಾಚಿಸಿತ್ತು!
'ಎನ್ನ ರಕ್ಷಿಸಿ ಪೋಷಿಸು' ಎಂದು ಭಕ್ತಿಪೂರ್ವಕ ಪ್ರಾರ್ಥಿಸಿತ್ತು!

ಕರುಣಾಪೂರ್ಣನ ಕೃಪಾಸುಧೆ ಎನ್ನ ಮನವನು ತಲುಪಿತ್ತು!
ವಿಷದ ವಿಷಮವನು ಬಡಿದೋಡಿಸಿತ್ತು!
ಬಲಿ ತೆಗೆಯುವ ರೋಗದ ಕುತಂತ್ರವನು ಮಟ್ಟಹಾಕಿತ್ತು!
ಸ್ನೇಹದ ವರವನು ನೀಡಿತ್ತು!
ಸ್ನೇಹದ ವರವನು ನೀಡಿತ್ತು!!

.... ಕರುಣಾಪೂರ್ಣನ ಕೃಪೆಗೆ ಪಾತ್ರನಾದ ನಾನೇ ಧನ್ಯ!
.....ಸ್ನೇಹದ ವರವನ್ನು ಪಡೆದ ನಾನೇ ಧನ್ಯ!

Wednesday, July 22, 2009

ವಿರಹ ಗೀತೆ


ಸಂಸಾರ ಸಾಗರದಲಿ ಅಹಂಕಾರ ತಿಮಿಂಗಿಲಗಳೆನ್ನನು
ಕಿತ್ತು ತಿನ್ನುತಿದೆ, ನಿನಗಿನ್ನು ಕರುಣೆಬಾರದೇಕೆ! ಪ್ರಭು?

ಇಂದ್ರಿಯ ವಾಸನೆಗಳು ಭೂತ ಪಿಶಾಚಿಗಳಂತೆ
ಎನ್ನನು ಮಸಣಕ್ಕೊಯ್ಯ್ದಿವೆ
ಎನ್ನ ರಕ್ಷಿಸಿ ಅನುಗ್ರಹಿಸುವ ಹೊಣೆ ನಿನ್ನದಲ್ಲವೇ! ಪ್ರಭು?

ಕಣ್ಣೀರ ಧಾರೆ ಹರಿಸಿ ಮಂಡಿಸುವೆನು ಪ್ರಶ್ನೆಯನು ಕೊರಗುತ
ನನ್ನ ವಿರಹವು ನಿನ್ನ ವಿರಹವೂ ಅಲ್ಲೆವೇ! ಪ್ರಭು?

ದಿನನಿತ್ಯವೂ ನಿನ್ನ ಸಿಹಿನೆನಪಿನಿಂದ ಮನಸ್ಸನು ಹಸಿರಾಗಿರಿಸಲು
ವಿರಹದಲಿ ಸಿಹಿಯನ್ನೇನಾದರು ಕಂಡುಕೊಂಡೆಯಾ! ಪ್ರಭು?

ನಿನ್ನನಗಲಿ ನೊಂದಿಹೆನು, ನೊಂದು ಬೆಂದಿಹೆನು
ಅಗಲಿಕೆಯ ವಿರಹವಿನ್ನು ಮುಗಿದಿಲ್ಲವೇಕೆ! ಪ್ರಭು?
ಇನ್ನೂ ಮುಗಿದಿಲ್ಲವೇಕೆ?

Tuesday, July 21, 2009

ಮನೆಯ ಕಟ್ಟುವೆನು

ಕಟ್ಟುವೆನು ಕಟ್ಟುವೆನು ಮನವೆಂಬ ಮನೆಯ ಕಟ್ಟುವೆನು!
ಸಾಗರಕ್ಕಿಂತ ವಿಶಾಲ, ಆಕಾಶಕ್ಕಿಂತ ಎತ್ತರ
ಹೀಗೊಂದು
ಮನೆಯ ಕಟ್ಟುವೆನು!

ಮನೆಯಲಿ ಕಲ್ಲುಗಂಬಗಳಿಲ್ಲ, ಇಲ್ಲ ಕಲ್ಲು ಚಪ್ಪಡಿ
ರಮಣನೇ ಆಧಾರಸ್ತಂಭ, ಇಲ್ಲಿ ಅರುಣಾಚಲನೇ ಚಾವಡಿ!
ಕಟ್ಟುವೆನು ಕಟ್ಟುವೆನು, ಮನವೆಂಬ ಮನೆಯ ಕಟ್ಟುವೆನು!

ಮನೆಯಲಿ ಸೂರ್ಯಚಂದ್ರರಿಲ್ಲ, ಇಲ್ಲ ಅವರಿಬ್ಬರ ಗ್ರಹಣವು
ರಮಣನ ತೇಜಃಪುಂಜವಿರಲು, ಸದಾ ಪ್ರಜ್ವಲಿಸುವುದು ನನ್ನಗೃಹವು!
ಕಟ್ಟುವೆನು ಕಟ್ಟುವೆನು, ಮನವೆಂಬ ಮನೆಯ ಕಟ್ಟುವೆನು!

ಮನೆಯಲಿ ಬಂಧು ಬಾಂಧವರಿಲ್ಲ, ಇಲ್ಲ ಮಡದಿ ಮಕ್ಕಳು
ರಮಣನೇ ನಾವಿಕನಾಗಿರಲು, ದಾಟಿಸುವನು ಸಂಸಾರ ಸಾಗರವನು!
ಕಟ್ಟುವೆನು ಕಟ್ಟುವೆನು, ಮನವೆಂಬ ಮನೆಯ ಕಟ್ಟುವೆನು!

ಮನೆಯಲಿ ಪಡಸಾಲೆ ಅಡುಗೆಸಾಲೆಗಳಿಲ್ಲ, ಇಲ್ಲ ದೇವರಕೋಣಿಯು
ರಮಣನೇ ಅಡುಗೆಭಟ್ಟನಾಗಿರಲು, ದಿನನಿತ್ಯ
ದೊರಕುವುದು ದಿವ್ಯಪ್ರಸಾದವು!
ಕಟ್ಟುವೆನು ಕಟ್ಟುವೆನು, ಮನವೆಂಬ ಮನೆಯ ಕಟ್ಟುವೆನು!

ಮನೆಯಲಿ ಆಳು-ಕಾಳುಗಳಿಲ್ಲ, ಇಲ್ಲ ರಾಜ-ರಾಣಿಯರು
ರಮಣನೊಬ್ಬನೇ ಚಕ್ರವರ್ತಿಯಾಗಿರಲು, ನಾನೇ ಅವನ ದಾಸನು!
ಕಟ್ಟುವೆನು ಕಟ್ಟುವೆನು, ಮನವೆಂಬ ಮನೆಯ ಕಟ್ಟುವೆನು!

ಮನೆಯಲಿ ದೇವರಮೂರ್ತಿಗಳಿಲ್ಲ, ಇಲ್ಲ ಅಭಿಷೇಕಾಚರ್ನೆಗಳು
ರಮಣನೇ ಸರ್ವಸ್ವನಾಗಿರಲು, ಕಾಣುವೆನೆಲ್ಲಡೆ ಪರಮಾನಂದವನು!
ಕಟ್ಟುವೆನು ಕಟ್ಟುವೆನು, ಮನವೆಂಬ ಮನೆಯ ಕಟ್ಟುವೆನು!

ಮನೆಯಂಗಳದಲಿ ನಿಂತು "ತೆರೆದಿದೆ ಮನೆ ಓ ಬಾ ಅತಿಥಿ..." ಎಂದು
ರಮಣನೇ ಆಹ್ವಾನಿಸುತಿರಲು, ಅವನ
ಜೋಡಿ ಆಡಿ ನಲಿದಾಡುವೆನು!
ಕಟ್ಟುವೆನು ಕಟ್ಟುವೆನು, ಮನಸೆಂಬ ಮನೆಯ ಕಟ್ಟುವೆನು!

Monday, July 20, 2009

ನೀ ಎನ್ನ ಸೆಳೆದಾಗ....

) ಪ್ರಣಾಮ
ಎನ್ನ ಮನದಲ್ಲಿ ಜ್ಞಾನದಾಹ ಬೀಜವನ್ನು ಬಿತ್ತಿ ಪೋಷಿಸಿದವನೆ!
ಎನ್ನ ಪಾದಗಳಿಗೆ ಅರುಣಗಿರಿ ಪ್ರದಕ್ಷಿಣೆ ಸವಿರುಚಿ ತೋರಿಸಿದವನೆ!
ಎನ್ನ ಹೃದಯಾಂತರಂಗವನು ಕರುಣಾಪೂರ್ಣ ಕಂಗಳಿಂದ ಸ್ಪರ್ಶಿಸಿದವನೆ!
ಎನ್ನೊಡೆಯ ಶ್ರೀ ರಮಣನೆ ನಿನಗೆ ಶತಕೋಟಿ ಪ್ರಣಾಮ!!

) ಸೋತಿಹೆನು
ನಿನ್ನನು ಕೊಂಡಾಡಲು
ಪದಪುಂಜವೇ ಸಾಲದೆ ಸೋತಿಹೆನು!
ನಿನಗೆ ಸಮರ್ಪಕವಾಗಿ ಕೃತಜ್ಞತೆಗಳನ್ನರ್ಪಿಸಲಾಗದೆ ಸೋತಿಹೆನು!
ಭಾವುಕನಾಗಿ, ನಿನ್ನ ಮಹಿಮೆಯನು ಪಾಡಲಾಗದೆ ಸೋತಿಹೆನು!
ನಿನ್ನ ಕೃಪಾಸುಧೆಗೆ ಮೂಕವಿಸ್ಮಿತನಾಗಿ ಸೋತಿಹೆನು!
ಸೋತಿಹೆನು ನಾ ಸೋತಿಹೆನು ಶ್ರೀ ರಮಣನೆ!
ನಿನಗೆ ನಾ ಮನಸೋತಿಹೆನು!!

ಶ್ರೀ ರಮಣಾರ್ಪಣಮಸ್ತು.

Thursday, July 16, 2009

ಭಜಿಸಿ ರಮಣನಾಮವನು

ಸುಖದಲಿ ರಮಣನಾಮ ಕೊಡುವುದು ಭಕುತಿಯನು
ದುಃಖದಲಿ ರಮಣನಾಮ ಕೊಡುವುದು ಶಕುತಿಯನು
ಭಕುತಿ-ಶಕುತಿಗಳ ನಡುವೆ ಕೊಡಲಿ ರಮಣನಾಮ ಮುಕುತಿಯನು
ಕೊಡಲಿ ರಮಣನಾಮ ಮುಕುತಿಯನು!

ಭಯಭೀತಿಯಲಿ ರಮಣನಾಮ ಕೊಡುವುದು ಧೈರ್ಯವನು
ಕುಗ್ಗಿದಾಗ ಸಂಸಾರದಲಿ ರಮಣನಾಮ ಕೊಡುವುದು ಸ್ಥೈರ್ಯವನು
ಧೈರ್ಯ-ಸ್ಥೈರ್ಯಗಳ ನಡುವೆ ಕೊಡಲಿ ರಮಣನಾಮ ಜ್ಞಾನಾಭ್ಯುದಯವನು
ಕೊಡಲಿ ರಮಣನಾಮ
ಜ್ಞಾನಾಭ್ಯುದಯವನು!

ನಿನ್ನ ನಾಮಸ್ಮರಣೆಗಿಂತ ಸಿಹಿಯಾದದ್ದು ಬೇರೊಂದಿಲ್ಲ
ನಿನ್ನ ನಾಮಸ್ಮರಣೆಯೊಂದಿದ್ದರೆ
ಬೇರೇನೂ ಬೇಕಿಲ್ಲ
ಸಂಸಾರದ ಬೇಕು-ಬೇಡಗಳ ನಡುವೆ ಕೊಡಲಿ ರಮಣನಾಮ ಶರಣಾಗತಿಯನು
ಕೊಡಲಿ ರಮಣನಾಮ ಶರಣಾಗತಿಯನು!

ತ್ಯಜಿಸಿ ದೇಹಾಭಿಮಾನವನು ಭಜಿಸಿ ರಮಣನಾಮವನು!
ಭಜಿಸಿ ರಮಣನಾಮವನು! ಭಜಿಸಿ ರಮಣನಾಮವನು!!
ಪಡೆಯಿರಿ ಕೃಪಾಕಟಾಕ್ಷವನು ಭಜಿಸಿ ರಮಣನಾಮವನು!
ಭಜಿಸಿ ರಮಣನಾಮವನು! ಭಜಿಸಿ ರಮಣನಾಮವನು!!


Monday, July 6, 2009

ಆ ಎರಡು ಕ್ಷಣಗಳು ...



ಸುದಿನ, ನಿಮ್ಮ ತೀಕ್ಷ್ಣ ಕಣ್ಣಂಚಿನ ಮೌನ ಎನಗೆ 'ಬಾ' ಎಂದಂತಿತ್ತು!
ನಿಮ್ಮ ಕಂಗಳು ವಿಶಾಲ ಸಾಗರವೆಂಬಂತೆ ನನ್ನನ್ನು ಮುಳುಗಿಸಿ ನುಂಗಿದಂತಿತ್ತು!
ನಿಮ್ಮ ಕಂಗಳ ವರ್ಚಸ್ಸು ನನ್ನ ಮನಸ್ಸಿನ ಎಲ್ಲೆಗಳ ಆಚೆಗೆ ಬೆಳಕ ಹರಿಸಿದಂತಿತ್ತು!
ನಿಮ್ಮ ನೋಟ ಮಾತ್ರದಿಂದಲೇ ನಾನು ನೀರಾಗಿ, ಕಣ್ಣೀರ ಧಾರೆಯಾಗಿ ಹರಿದೆನು!
ಕ್ಷಣದಲ್ಲಿ ಹಿಂದೆಂದೂ ಕಾಣದ ಪ್ರೀತಿ ವಾತ್ಸಲ್ಯವನು, ಕರುಣಾಧಾರೆಯನು ನಿಮ್ಮಲ್ಲಿ ಕಂಡೆನು!!

ಏನೆಂದು ಬಣ್ಣಿಸಲಿ ರಮಣಾಚಲ?
ಕಬ್ಬಿಣದ ಕಸವಾಗಿದ್ದ
ನನ್ನನ್ನು ಸೂಜಿಗಲ್ಲಿನಂತೆ
ಸೆಳೆದು ಸೆರೆಹಿಡಿದ ಎರಡು ಕ್ಷಣಗಳ ಏನೆಂದು ನಾ ಬಣ್ಣಿಸಲಿ?
ಮೌನದಲೇ ಮಾತನಾಡಿಸಿ ಮೂಕವಿಸ್ಮಿತಗೊಳಿಸಿದ
ನಿಮ್ಮ ಮಹಿಮೆಯನು ನಾನೇನೆಂದು ಬಣ್ಣಿಸಲಿ ತಂದೆ!

ಸೋತಿಹೆನು ಮಾಡಲಾಗದೆ ಕ್ಷಣದ
ವರ್ಣನೆ!
ಆದರೂ, ಸದಾ ಇರಲಿ ನನಗೆ ಕ್ಷಣದ
ಸ್ಮರಣೆ!

ಆಶೆಗಳು ಇಲ್ಲವೆನಲು ನಾ ಯೋಗ್ಯ ಯೋಗಿಯೇನಲ್ಲ!
ಇರಲಿ ಒಂದೇ ಒಂದು, ಆಶೆಯೊಂದೆನಗೆ
ಇರಲಿ ಜೀವನದ ಕ್ಷಣ ಕ್ಷಣವು, ಪ್ರತಿ ಕ್ಷಣವೂ
ಎರಡು ಕ್ಷಣಗಳಂತೆ!! ಎರಡು ಕ್ಷಣಗಳಂತೆ!!!

.....ನಿಮ್ಮ ಪವಿತ್ರ ಚರಣಾರವಿಂದಗಳಲ್ಲಿ .